ನಡುರಾತ್ರಿಯ ಬರಹ

ಕಳೆದ ಕೆಲವು ತಿಂಗಳುಗಳಿಂದ ಯುರೋಪ್ ಹಾಗೂ ಉತ್ತರ ಅಮೇರಿಕಾದ ಮಧ್ಯ ನಿರಂತರ ಓಡಾಟ ನಡೆಯುತ್ತಿದೆ. ಒಂದೆರಡು ವಾರ ಉತ್ತರ ಅಮೇರಿಕಾದಲ್ಲಿ, ನಂತರ ಒಂದೆರಡು ವಾರ ಜರ್ಮನಿಯಲ್ಲಿ. ಒಮ್ಮೆ ಅಮೇರಿಕಾದ ಪೂರ್ವಭಾಗವಾದರೆ, ಮತ್ತೊಮ್ಮೆ ಪಶ್ಚಿಮ ಭಾಗ. ಕಳೆದ ವಾರವೇ ಮರಳಿ ಬಂದ ನನಗೆ, ಈ ವಾರ ಕೆನಡಾ ಪ್ರಯಾಣದ ಸಮಯ. ಇಷ್ಟೆಲ್ಲಾ ಸುತ್ತುತ್ತಿರುವಾಗ ತ್ವರಿತ ಕಾಲಮಾನಗಳ ಬದಲಾವಣೆಯಿಂದ, ಜೈವಿಕ ಕ್ರಿಯೆಗಳಲ್ಲಿ ಸ್ವಲ್ಪ ಏರುಪೇರಾಗಿ ಆಯಾಸವಾಗುವುದು ಸಹಜ. ಈ ಸ್ಥಿತಿಗೆ ಆಂಗ್ಲ ಭಾಷೆಯಲ್ಲಿ ಜೆಟಲ್ಯಾಗ್ (jetlag) ಎನ್ನುತ್ತಾರೆ.

ಸುಮಾರು ಒಂದು ವರ್ಷದ ಹಿಂದೆ, ಸದ್ಗುರುರವರ ಈ ಬ್ಲಾಗನಲ್ಲಿ ಖಂಡಾತರ ಪ್ರಯಾಣದ ಕುರಿತು ನೀಡ ೪ ಸಲಹೆಗಳನ್ನು ಓದಿದೆ. ತದನಂತರ ಜೆಟಲ್ಯಾಗ ಸಂಪೂರ್ಣವಾಗಿ ನನ್ನ ಹಿಡಿತದಲ್ಲಿ ಬಂದು. ಈ ಸಲಹೆಗಳನ್ನು ಬಳಸಿ, ಕಳೆದ ವರ್ಷ ಕೆನಡಾದಿಂದ ಭಾರತಕ್ಕೆ ಪ್ರಯಾಣಿಸಿದರೂ ಯಾವುದೇ ರೀತಿಯ ಆಯಾಸ, ಏರುಪೇರು ಕಂಡುಬರಲಿಲ್ಲ. ಅಂದಿನಿಂದ ಈ ೪ ಸೂತ್ರಗಳು ನನ್ನ ಪ್ರಯಾಣವನ್ನು ಸುಲಭ ಹಾಗೂ ಸರಳಗೊಳಿಸಿವೆ. ಕಳೆದ ವಾರ ಜರ್ಮನಿಯ ವಿಮಾನಯಾನವಾದ ಲುಫ್ತಾನ್ಸಾದಲ್ಲಿ ಲಾಸ ಎಂಜಲೀಸನಿಂದ ಫ್ರಾಂಕ್ಫರ್ಟಗೆ ಬಂದೆ. ಆ ವಿಮಾನದಲ್ಲಿ ವಿಶೇಷವಾಗಿ ಕೇವಲ ಹಣ್ಣಿನ ಊಟವನ್ನು ಆಯ್ಕೆಮಾಡಿಕೊಳ್ಳಲು ಅವಕಾಶವಿದೆ. ಎರಡು ವಾರಗಳ ಹಿಂದೆ ಜರ್ಮನಿಯಿಂದ ಅಮೇರಿಕಾಗೆ ಹೋಗುವಾಗ ನನ್ನ ಹಣ್ಣಿನ ವಿಶೇಷ ಊಟವನ್ನು ವಿಮಾನದಲ್ಲಿ ಸೇರಿಸಲು ಮರೆತಿದ್ದ ಅವರು, ಈ ಬಾರಿ ಹಣ್ಣಿನ ಊಟದ ಜೊತೆಗೆ, ಸಸ್ಯಾಹಾರಿ ಊಟವನ್ನೂ ನೀಡಿದರು. ಸಾಮಾನ್ಯವಾಗಿ ಬೇಯಿಸಿದ / ಕುಡಿಸಿದ ಆಹಾರ ಪದಾರ್ಥಗಳನ್ನು ಈ ಖಂಡಾತರ ಪ್ರಯಾಣದಲ್ಲಿ ಸ್ವೀಕರಿಸದ ನಾನು, ಅಂದು ಏಕೋ ಏನು ಎರಡೂ ಊಟವನ್ನು ಮಾಡಿದೆ. ಊಟವೇನೋ ಚೆನ್ನಾಗಿತ್ತು, ಆದರೆ ಜರ್ಮನಿಗೆ ಬಂದಿಳಿದ ನಂತರ ಇಲ್ಲಿನ ಸಮಯಕ್ಕೆ ಹೊಂದಿಕೊಳ್ಳಲು ಸುಮಾರು ೨ ದಿನಗಳು ಬೇಕಾಯಿತು.

ನಮ್ಮ ಆಹಾರ ಪದ್ಧತಿಯನ್ನು ವಿವರವಾಗಿ ನೋಡಿದಾಗ, ನಾವು ಸ್ವೀಕರಿಸುವ ಆಹಾರ, ಸ್ವೀಕರಿಸುವ ಸಮಯ ಹಾಗೂ ಸ್ವೀಕರಿಸುವ ರೀತಿಯು ನಮ್ಮ ಜೀವನದ ಮೇಲೆ ಬಹು ಪ್ರಭಾವ ಬೀರುವುದು. ಈ ಮೂರು ವಿಷಯಗಳ ಸಮತೋಲನದಿಂದ ನಾವು ಕೈಗೊಳ್ಳಬೇಕಾದ ಕೆಲಸಗಳಿಗೆ ಸೂಕ್ತವಾದ ವಾತಾವರಣವನ್ನು ಈ ದೇಹದಲ್ಲಿ ಮೂಡಿಸಿಕೊಳ್ಳಬಹುದು. ಈ ಯೋಚನೆಯ ಮುಂದುವರಿದ ಭಾಗವೇ ಈ ನಡುರಾತ್ರಿ ಬರಹ ಪ್ರಯೋಗ. ಈಗ ಸಮಯ ಸುಮಾರು ರಾತ್ರಿ ೨.೩೦. ಇನ್ನು ಸ್ವಲ್ಪ ಹೊತ್ತಿನಲ್ಲೇ ಮುಂಜಾವು ಆರಂಭ, ತದನಂತರ ದಿನದಾರಂಭ. ಕೆಲಸ ಮತ್ತು ವಿಶ್ರಾಮಗಳ ಮಧ್ಯೆ ಸಮತೋಲನ ತರುತ್ತಾ, ಕೆಲಸದ ಕ್ಷಮತೆ ಹೆಚ್ಚಿಸುತ್ತಾ, ನಿದ್ದೆಯನ್ನು ಕಡಿಮೆಗೊಳಿಸುತ್ತಾ ಈ ಪ್ರಯೋಗ ಮುಂದುವರಿಯುವುದು.

ನಿದ್ದೆಯಿಲ್ಲದೆ, ಚೈತನ್ಯಪೂರ್ನವಾಗಿ ಸತವಾಗಿ ೩-೪ ದಿನಗಳ ಕಾಲ ಕೆಲಸದಲ್ಲಿ ವ್ಯಸ್ತರಾಗಿರುವವರನ್ನು ನೋಡಿರುವೆ. ಅವರಂತೆಯಲ್ಲದಿದ್ದರೂ, ೨೪ಗಂಟೆಗಳಲ್ಲಿ ಅತೀ ಹೆಚ್ಚು ಕಾಲ ಚೈತನ್ಯಪೂರ್ವಕವಾಗಿ ಇರುವೆಡೆಯೇ ಈ ಪ್ರಯೋಗದ ನಡೆ…

ಶಂಭೋ!

ಪಾರದರ್ಶಕತೆ

ಸುಮಾರು ಎರಡು ವರ್ಷಗಳ ಹಿಂದೆ ಮೊದಲ ಬಾರಿಗೆ ಅಮೇರಿಕಾ ದೇಶಕ್ಕೆ ಬರುವ ದಿನ, ನನ್ನ ಫೇಸ್ಬುಕನಲ್ಲಿ ಒಂದು ಸ್ವಪ್ರಶ್ನೆಯನ್ನು ಹಾಕಿಕೊಂಡಿದ್ದೆ. ಅದೇನೆಂದರೆ “ಭೋಗ ನಾಡಿನಲ್ಲಿ ವೈರಾಗ್ಯ ಅರಳುವುದೇ? “.

mantras-explained-mantra-to-transformation-sanskrit

ಅಂದಿನಿಂದ ಹಲವಾರು ಬಾರಿ ಅಮೇರಿಕಾಗೆ ಬಂದಿರುವೆ. ಮುಂದೆಯೂ ಬರಬಹುದು. ಆದರೆ ಈ ಬಾರಿ, ನನ್ನ ಪ್ರಶ್ನೆಗೆ ಉತ್ತರ ಕಂಡುಕೊಂಡತೆ ಭಾಸವಾಗುತ್ತಿದೆ. ಇಲ್ಲಿ ‘ವೈರಾಗ್ಯ‘ ಶಬ್ದದ ಸರಿಯಾದ ಅರ್ಥವನ್ನು ಅರಿಯುವುದು ಮುಖ್ಯ. ಒಂದೇ ಶಬ್ದದಲ್ಲಿ ಹೇಳುವುದಾದರೆ ಪಾರದರ್ಶಕತೆ. ನಮ್ಮ ಜೀವನವನ್ನು ಹೇಗಿದೆಯೋ ಹಾಗೆ ನೋಡುವುದೇ ವೈರಾಗ್ಯ. ಅದಕ್ಕೆ ಯಾವುದೇ ಬಣ್ಣವನ್ನು ಬಳಿಯಬೇಕಾಗಿಲ್ಲ. ಜೀವನ ಸಂಪೂರ್ಣ ಪಾರದರ್ಶಕವಾಗಿ ಅಥವಾ  ಎಲ್ಲಾ ಬಣ್ಣದೊಳಗೊಂದಾಗುವುದೇ ವೈರಾಗ್ಯ.

ಈ ಸತ್ಯದೆಡೆ ಮಾರ್ಗವನ್ನು ತೋರಿಸಿದ ಆ ಮಹಾನ್ ಗುರು, ಸದ್ಗುರುಗಳಿಗೆ ನಾ ಸದಾ ಚಿರಋಣಿ.

ಶಂಭೋ…

ಸ್ಯಾನ್ ಹುಸೆ
೧೬-೦೫-೨೦೧೮

ಚಿತ್ರ ಆಕರ: ಇಶಾ ಬ್ಲಾಗ್

ಕದಡಿದ ಕಣಿವೆ

ಭಾರತದ ಮುಕುಟವಾದ ಕಾಶ್ಮೀರದ ಕಣಿವೆಯಲ್ಲಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ತುಣುಕುಗಳನ್ನು ಹಾಗು ಅದರಿಂದ ಆದ (ಇನ್ನೂ ಆಗುತ್ತಿರುವ) ದುಷ್ಪರಿಣಾಮಗಳ ಒಂದು ಮುಖವನ್ನು ಈ ಪುಸ್ತಕ ತೋರಿಸುತ್ತದೆ. ಲೇಖಕ ರಾಹುಲ ಪಂಡಿತರು ಮತ್ತು ಅವರ ಸಂಭಂದಿಕರು ಹಾಗೂ ಅವರ ಗೆಳೆಯರು ಅನುಭವಿಸಿದ ಕಷ್ಟ-ಕೋಟಲೆಗಳು ಒಂದೆಡೆಯಾದರೆ, ನಮ್ಮ ಸರ್ಕಾರದ ಮತ್ತು ಮಾಧ್ಯಮದ ನಿರ್ಲಿಪ್ತತೆ ಎದ್ದು ಕಾಣುತ್ತದೆ. ನಮ್ಮ ದೇಶದಲ್ಲಿ ನಮ್ಮವರೇ ನಿರಾಶ್ರಿತರಾಗಿ ಬದುಕುವುದು ಜೀರ್ಣಿಸಿಕೊಳ್ಳಲಾಗದ ಕಟು ಸತ್ಯ. ಈ ಪುಸ್ತಕವನ್ನು ಓದಿದ ನಂತರ ನನ್ನ ಮನಸ್ಸಿನಲ್ಲಿ ಉಳಿಯುವ ಕೊನೆಯ ಪ್ರಶ್ನೆಯೇನೆಂದರೆ :  ಲಕ್ಷಾಂತರ ಟಿಬೆಟಿನ ನಿರಾಶ್ರಿತರಿಗೆ ಹಲವು ದಶಕಗಳಿಂದ ಎಲ್ಲಾ ಸೌಲಭ್ಯಗಳನ್ನು ನೀಡಿ, ಪಾಲಿಸಿ, ಪೋಷಿಸುತ್ತಿರುವ ಭಾರತಕ್ಕೆ, ನಮ್ಮ ಮನೆಯ ಪಂಡಿತರನ್ನು ಬೀದಿಯಲ್ಲಿರಿಸಿರುವುದು ಏಕೆ? ಸರ್ಕಾರಗಳು ಮತ್ತು ಮಾಧ್ಯಮಗಳು ಕಿವುಡು ಮೌನದ ಕಟುಕರಂತೆ ವರ್ತಿಸುವುದರ ಹಿಂದಿರುವ ಮರ್ಮವೇನು?

Screenshot_2015-11-02-20-20-26
ಕದಡಿದ ಕಣಿವೆಕದಡಿದ ಕಣಿವೆ

 

ಅಂತರಂಗದೊಳಗೆ

ಸಾಲಿ ಕಲ್ಯಾಕ ಅಂತ ಮನಿ ಬಿಟ್ಟು ಒಂದು ದಶಕದ ಮ್ಯಾಲೆ ಆತು. ಇನ್ನೂ ಓದು ಮುಗ್ದಿಲ್ಲಾ… ಮನಿ ಬಿಡಬೇಕಾದ್ರ ಈ ಪಾಟೀ ಮುಂದ ಓದಕೋತ ಹೊಕ್ಕೆನಿ ಅಂತ ಕಲ್ಪನಾನೂ ಇರಲಿಲ್ಲ. ಕಳೆದ ಹತ್ತ ವರ್ಷದಾಗ ಗೆಳ್ಯಾರ ಕೂಡ ವಿದ್ಯಾರ್ಥಿನಿಲಯದಾಗ ಅಥ್ವಾ ಮನಿ ಮಾಡಿ ಇದ್ನಿ. ಬ್ಯಾರೆ ಬ್ಯಾರೆ ರಾಜ್ಯದಿಂದ ಬಂದ  ಮಂದಿ ಜೋಡಿ ಬೆಂಗಳೂರಿನ್ಯಾಗ ಇದ್ದೆ. ಬೆಂಗಳೂರು ಬಿಟ್ಟು ನಮ್ಮ ದೇಶದಾಗ ಅಡ್ಡಾಡಿದಲೆಲ್ಲ ಹೊಸ ಗೆಳ್ಯಾರು, ಹೊಸ ಗೆಳತನ ಹಂಗ ಹೊಸ ಜಾಗ ಅಡ್ಡಾದಡುದು ನಡೀತಿತ್ತು.

ಹಂಗ ಒಂದ ದಿನ ದೇಶಾಂತರ ಅಂತ ಬ್ಯಾರೇ ದೇಶಕ್ಕ ಬಂದೆ. ಅಲ್ಲಿಂದ ಮತ್ತೊಂದು ದೇಶ. ಹಂಗ ಮಂಗ್ಯಾನಹಂಗ ಜಿಕ್ಕೋತ ಹೊಂಟೇನಿ. ಈ ವಿದೇಶಕ್ಕ ಬಂದ್ಮ್ಯಾಗಂತೂ ಬ್ಯಾರೆ ಬ್ಯಾರೆ ಊರಾಗ ಬ್ಯಾರೆ ಬ್ಯಾರೆ ಸಂಸ್ಕೃತಿಯ ಹಿನ್ನಲೆ ಮತ್ತು ದೇಶದಿಂದ ಬಂದಾವ್ರ ಜೊತಿ ಮನಿ ಮಾಡಿ ಇದ್ದೆ. ಏನೋ ಅಲ್ಪ-ಸ್ವಲ್ಪ ಹೊಸ-ಹೊಸ ಜಗತ್ತನ್ನ ತಿಳಕೋತ ಜೀವನ ನಡ್ಸೇನಿ. ಸ್ವಲ್ಪ ತಿಂಗ್ಳ ಹಿಂದ ಹಳಿ ಊರು ಬಿಟ್ಟು, ಹೊಸಾ ಜಾಗಕ್ಕ ಸಾಲಿ ಕಲ್ಯಾಕಂತ ಬಂದೆ. ಇಲ್ಲಿ ಬಂದ್ರ ಒಂದ ವಿದ್ಯಾರ್ಥಿನಿಲಯನೂ ಖಾಲಿ ಇಲ್ಲಾ ಮತ್ತ ಒಂದ ಮನಿನೂ ಸಿಗುವಾಲ್ದು ಅನ್ನು ಹಾಗಿತ್ತು. ಅಂತೂ ಇಂತೂ ಕಷ್ಟ ಪಟ್ಟು ಒಂದು ಖೋಲೆ ಇರು ಮನಿ ಹಿಡ್ದೆ. ಆದ್ರ ಒಬ್ಬಾವಂಗ ಮನಿ ಎಲ್ಲಾ ಒಂದ ದಂಡಿ ಹಚ್ಚು ತನ ಸಾಕ-ಸಾಕಾತು. ನಾಕೈದು ತಿಂಗ್ಳು ಆದ್ರೂ ಇನ್ನೂ ಎಷ್ಟೋ ಕೆಲಸ ಬಾಕಿ ಅದಾವ… ಅದ ಹಂಗಿರ್ಲಿ…

ಮೊದಮೊದ್ಲು ಒಬ್ಬಾವ  ಮನ್ಯಾಗ ಇರಾಕ ಯಾಕೋ ಭರಪೂರ ಬ್ಯಾಸರ್ಕಿ. ಮಾತಾಡಾಕ ಯಾರಿಲ್ಲ, ಯಾವಾಗರೇ ಒಂದಿಷ್ಟು ಮಂದಿ ಕೂಡಿ ಅಡಗಿ ಮಾಡಿ ಉಣ್ಣುಣು ಅನ್ನುಹಂಗಿಲ್ಲ. ಹೇಳಿ-ಕೇಳಿ ವಾರಾಂತ್ಯದಾಗಂತೂ ಎಷ್ಟು ಹೊತ್ತು ಗಣಕಯಂತ್ರದ ಮ್ಯಾಲೆ ಕುಂಡ್ರುದು? ಒಮ್ಮೊಮ್ಮೆ ಇಡೀ ದಿನ ಯಾರ ಜೊತಿನೂ ಮಾತಾಡದ ಮೌನಿಬಾಬಾ ಗತ್ಲೆ ಇರುದಾಕ್ಕೇತಿ. ಇವತ್ತು ಹಂಗ ಬೆಳಗ್ಗೆಯಿಂದ ಊಟ ಮಾಡುದು ಬಿಟ್ರ ಬಾಯಿನ ತೆಗೆದಿಲ್ಲ. ವಾರಂತ್ಯದಾಗ ಬಹಿರಂಗದ ಜೊತಿ ಏನೂ ಸಂಭಂದಿಲ್ಲ – ಸೂತ್ರಯಿಲ್ಲ.

ಅನುಭವ ಹೇಳ್ತದ : ಒಮ್ಮೊಮ್ಮೆ ನಾವು ಬರೀ ನಮ್ಮ ಅಂತರಂಗದ ಜೋಡಿ ಇದ್ದು ನೋಡಬೇಕು. ನಾ ಆತು ನನ್ನ ಅಂತರಂಗ ಆತು ಅನ್ನುಹಂಗ. ಆಗ ನಮ್ಮ  ಆಲೋಚನೆಗಳನ್ನ ನಾವೇ ವಿಮರ್ಶಿಸಿಕೊಳ್ಳಲು ಒಂದ ಬರೋಬ್ಬರ ವೇದಿಕೆ ತಯಾರ ಆಕ್ಕೇತಿ. ಆ ವೇದಿಕೆಯಲ್ಲಿ ನಾವೇ ಪಾತ್ರಧಾರಿ ಮತ್ತು ಸೂತ್ರಧಾರಿ. ನಮ್ಮ ಮೌಲ್ಯಮಾಪನ ನಮಗ ಹೊಳಪು ತರುದು ಪಕ್ಕಾ. ಎಲ್ಲಕಿಂತ ಮುಖ್ಯ ಸುವಿಚಾರಗಳು ಮತ್ತು ನವೀನ ಆಲೋಚನೆಗಳಿಗೆ ಹೇಳಿ ಮಾಡಿಸಿದಂತಹ ವಾತಾವರಣ. ಬಹಿರಂಗದ ಬಾಗಿಲನ್ನು ಮುಚ್ಚಿ ನಮ್ಮ ಅಂತರಂಗವೆಂಬ ಗರ್ಭಗುಡಿಯ ಬಾಗಿಲನ್ನು ತೆರೆದು ನೋಡುವ ಪ್ರಶಾಂತತೆ ಆ ಮೌನದಾಗ ಮೂಡಿರುತ್ತದೆ.

ವಾರಪೂರ್ತಿ ಈ ಧಾವಂತದಾಗಿರು ನಮಗ ಈ ಒಂದೆರಡು ದಿನದ ನೀರವ ಮೌನ ಜೀವನವನ್ನು ಪುನಶ್ಚೇತನಗೊಳಿಸುವುದಂತೂ ಖಂಡಿತ. ಈ ಮೌನದ ಶಕ್ತಿ ಯಾವುದೇ ಶಬ್ದಕ್ಕೂ ಬರದು.

ಕೊನೆಯ ಮಾತು: ಬಸವಣ್ಣನವರು ಹೇಳಿದ ಅಂತರಂಗದ ಶುದ್ಧಿ ಈ ಮೌನದಿಂದ ಖಂಡಿತ ಸಾಧ್ಯ.

 

ಮಹತ್ತರವಾದ ಸಮೀಕರಣಗಳು

ಮಹತ್ತರವಾದ ಸಮೀಕರಣಗಳು (The great equations) ಒಂದು ಆಂಗ್ಲ ಭಾಷೆಯ ಪುಸ್ತಕ. ಇದನ್ನು ಬರೆದವರು ರಾಬರ್ಟ್ ಕ್ರೀಸ್. ಸಮೀಕರಣಗಳ ಮೂಲಕ ವಿಶ್ವದ ಸೌಂದರ್ಯ ಅನಾವರಣಗೊಳ್ಳುವುದನ್ನು ಅದ್ಭುತವಾಗಿ ದಾಖಲಿಸಿದ್ದಾರೆ. ಈ ಪುಸ್ತಕದಲ್ಲಿ ಒಟ್ಟು ಹತ್ತು ಅಧ್ಯಾಯಗಳಿವೆ. ಆದಿ ಗೊತ್ತಿರದ ಪೈಥಾಗೊರಸನ ನಿಯಮದಿಂದ ಶುರುವಾಗಿ ಐನ್‍ಸ್ಟೈನ್‍ರ ಪ್ರಸಿದ್ಧ E=mc  ಸಮೀಕರಣಗಳನ್ನೋಳಗೊಂಡಂತೆ ವಿಶ್ವದ ಒಂಬತ್ತು ಮಹತ್ತರ ಸಮೀಕರಣಗಳ ಉಗಮದ ಕಾರಣಗಳನ್ನು ಮತ್ತು ಆ ಕಾಲದ ಚರಿತ್ರೆಯನ್ನು ಬರೆದಿದ್ದಾರೆ. ಈ ಪುಸ್ತಕವು ಕೇವಲ ಗಣಿತಜ್ಞರಿಗೆ ಅಥವಾ ವಿಜ್ಞಾನಿಗಳಿಗೆ ಸೀಮಿತವಾಗಿರದೇ ಜನಸಾಮಾನ್ಯರಿಗೂ ಸರಳವಾಗಿ ತಲುಪುವಂತೆ ರಚಿಸಿದ್ದಾರೆ. ಸೃಷ್ಟಿಕರ್ತನ ಕೆಲವೊಂದು ಲೀಲೆಗಳನ್ನು ಈ ಮಾನವ ಗಣಿತದ ಮೂಲಕ ಹೇಗೆ ಅರ್ಥೈಸಿಕೊಂಡಿರವನು ಎಂದು ತಿಳಿಯುವ ಇಚ್ಚೆಯಿರುವವರಿಗೆ ಈ ಪುಸ್ತಕ ಒಂದು ದಾರಿದೀಪ.

51lwsBBSrNL._SX328_BO1,204,203,200_

೭ ವರ್ಷಗಳ ನಂತರ, ೧೪ ಸಾವಿರ ಕಿಮೀ ದೂರದಲ್ಲಿ ಭೇಟಿಯಾದ ನಮ್ಮ ಸರ್ ಮತ್ತು ಅವರ ಕುಟುಂಬ

ಮೂರು ಖಂಡದಾಗಿರು ಮೂರು ಮಂದಿ ನಡು ಆದ ಮಾತುಕತಿ

ನಾ (ಯುರೋಪ್) , ಬರ್ಗಿ (ಏಷ್ಯಾ) ಮತ್ತ ನಮ್ಮ ಸರ್ (ಉತ್ತರ ಅಮೇರಿಕಾ)…

ಸುಮಾರು ಐದು ವಾರಗಳ ಮೊದ್ಲು

ನಾ (ವಾಟ್ಸಆಪನ್ಯಾಗ): ಲೇ ಬ, ಸ್ವಲ್ಪ ಸರ್ ವಾಟ್ಸಆಪ್ ಸಂಖ್ಯಾ ಕೊಡ್ಲೇ…

ಬ (ವಾಟ್ಸಆಪನ್ಯಾಗ): ತೊಗೊಲೆ +೧ಕ್ಷಕ್ಷಕ್ಷಕ್ಷಕ್ಷಕ್ಷಕ್ಷಕ್ಷಕ್ಷಕ್ಷ

ನಾ (ವಾಟ್ಸಆಪನ್ಯಾಗ) : ನಮಸ್ಕಾರ್ರಿ ಸರ, ಹೆಂಗದಿರಿ, ಏನ್ ನಡ್ಸಿರಿ?

ಸ (ವಾಟ್ಸಆಪನ್ಯಾಗ) : ಆರಾಮ ನೋಡಪಾ. ನೀ ಹೆಂಗದಿ. ಎಲ್ಲದೀ? ಏನ್ ಮಾಡಾತಿ? ತಡಿ ಮಾತಾಡೂನು

ವಾಟ್ಸಆಪನ್ಯಾಗ ಕರೆ ಬಂತು:

ಸ: ಏನಪಾ ಎಲ್ಲಾ ಹೆಂಗದ? ಎಲ್ಲಿ ಕೆಲಸ ಮಾಡಾತಿ?

ನಾ  : ಇನ ಕಲ್ಯಾತೆನ್ ನೋಡ್ರಿ ಸರ…

ಸ  : ಮದ್ವಿ-ಗಿದ್ವಿ ಆಕ್ಕಿ ಇಲ್ಲೋ… ನೋಡಲ್ಲಿ ಬ ನೂ ಮದ್ವಿ ಆಗ್ಯಾನ.

ನಾ  : ಅವರೆಲ್ಲ ನೌಕ್ರಿ ಮಂದಿರಿ ಸರ. ನಮ್ದ ಇನ ಸಾಲಿನ ಮುಗ್ದಿಲ್ಲ….

ಸ : ದೌಡ ಕಲಿಯುದು ಮುಗಸ್ಪಾ… ಎಷ್ಟಂತ ಕಲ್ಯಾಂವ?

ನಾ : ನೋಡೂನು ತೊಗೋರಿ ಸರ… ಅಂದಂಗ ನೀವು ಅಲ್ಲೇ ಉ.ಅಮೇರಿಕಾಗಾಗ ಅದಿರಿಲ್ಲೋ…

ಸ : ಹೌಂದಪಾ, ಇಲ್ಲೇ ಅದೀನಿ! ಏನ್ ಈ ಕಡೆ ಬರಾತಿಯೇನು?

ನಾ : ಹೌಂದರೀ ಸರ… ಇನ್ನೊಂದು ನಾಕ ವಾದಾಗ ನಿಮ್ಮೊರಾಗ ಇರ್ತೆನ್ ನೋಡ್ರಿ…

ಸ : ಛುಲೋ ಆತ ನೋಡೋ. ಮನಿಗೆ ಬಾ

ನಾ : ಬರೂನ್ರಿ ಸರ.

ನಾಕ ವಾರ ಅದ್ಮ್ಯಾಗ ಬೇಸ್ತಾರ ಸಂಜಿಕೆ ಅವ್ರ ಊರಾಗಿನ ವಿಮಾನ ನಿಲ್ದಾಣದಾಗ ಇಳಿದ್ಮ್ಯಾಗ:

ನಾ (ವಾಟ್ಸಆಪನ್ಯಾಗ) : ನಿಮ್ಮೂರಾಗ ಇಳದೆನ್ ನೋಡ್ರಿ ಸರ.

ಸ (ವಾಟ್ಸಆಪನ್ಯಾಗ) : ಮಸ್ತ್ ಆತ ನೋಡೋ… ಹಂಗಾರ ನಾಳೆ / ನಾಡಿದ್ದು ಭೆಟ್ಟಿಯಾಗೂನು

ನಾ (ವಾಟ್ಸಆಪನ್ಯಾಗ) : ಆತ್ರಿ ಸರ. ನಾಳೆ ನಾ ಹೇಳ್ತೀನಿ…

ಮರದಿನ, ಶುಕ್ರಾರ ಚಂಜಿವ್ಯಾಳೆ

ವಾಟ್ಸಆಪನ್ಯಾಗ ಕರೆ ಮಾಡಿ

ನಾ : ಸರ ನಾಳೆ ಬೆಳಗ್ಗೆ ಭೆಟ್ಟಿಯಾಗೂನೆನ್ರಿ?

ಸ : ಆತೋ. ಬೆಳಿಗ್ಗೆ ನಾಷ್ಟಾಕ್ಕ ಮನಿಗೆ ಬಾ…

ನಾ : ಮನಿ ಪತ್ತಾ ಹೇಳ್ರಿ ಸರ, ನಾ ಬರ್ತೇನಿ

ಸ : ಬ್ಯಾಡ, ನಾನ ಕರ್ಯಾಕ ಬರ್ತೇನಿ

ನಾ : ಸರ, ಸುಮ್ಮ ಯಾಕ ತ್ರಾಸ ತೊಗೊತಿರಿ, ಮನಿ ಪತ್ತಾ ಹೇಳ್ರಿ ನಾ ಬರ್ತೇನಿ

ಸ : ನಿಂಗ ಅವೆಲ್ಲಾ ತಿಳಿಯಾಂಗಿಲ್ಲ, ನಾ ಬರ್ತೇನಿ. ನೀ ಎಲ್ಲಿ ಇರ್ತಿ ಅದನ್ನ ಹೇಳ

ನಾ : ಸರ ನಾ ಕ್ಷಕ್ಷಕ್ಷಕ್ಷಕ್ಷದಾಗ ಇರ್ತೆನ್ರಿ.

ಸ : ಸರಿ, ಬೆಳಗ್ಗೆ ೧೦ ಕ್ಕ ತಯಾರಿರು. ನಾ ಬರ್ತೇನಿ.

 

ಮರದಿನ, ಶನಿವಾರ

ನಾ (ವಾಟ್ಸಆಪನ್ಯಾಗ , ೯ಕ್ಕ): ಸರ, ಮನಿ ಬಿಡುಮುಂದ ಹೇಳ್ರಿ. ನಾ ಕೆಳಗ ರಸ್ತೆ ಮ್ಯಾಲೆ ಬಂದ ನಿಂದರ್ತೆನಿ…

ಸ (ವಾಟ್ಸಆಪನ್ಯಾಗ) : ಆತೋ. ಬಿಡುಮುಂದ ಹೇಳ್ತೆನಿ…

ಸ (ವಾಟ್ಸಆಪನ್ಯಾಗ ೯.೩೦ಕ್ಕ) : ಇನ್ನ ಇಪ್ಪತ್ತ ಮಿಂಟನಾಗ ಬರ್ತೇನಿ. ನೀ ಕೆಳಗ ಬಂದ ರಸ್ತೆ ಮ್ಯಾಗ ನಿಂತಿರು

ಸ (ವಾಟ್ಸಆಪನ್ಯಾಗ ೧೦ಕ್ಕ) : ಬಂದೇನ್ ನೋಡೋ. ಎಲ್ಲಿ ಕಾಣವಾಲಿ?

ನಾ (ವಾಟ್ಸಆಪನ್ಯಾಗ) : ಇಲ್ಲೇ ಅದೇನ್ರಿ, ಒಂದ ಮಿಂಟನಾಗ ಬಂದೆ ನೋಡ್ರಿ.

 

೭ ವರ್ಷ ಆದ್ಮ್ಯಾಗ ೧೪,೦೦೦ ಕಿಮೀ ದೂರ ಮುಖಾಮುಖಿ ಆದ್ವಿ

ನಾ : ಏನ್ರಿ ಸರ ಅರಾಮೇನ್ರಿ?

ಸ : ಆರಾಮ ನೋಡೋ… ನೀ ಹೆಂಗದಿ?

ನಾ : ಮಸ್ತ ನೋಡ್ರಿ ಸರ. ಏನರ್ರೀ ಸರ ೭ ವರ್ಷ ಆದ್ರೂ ಏನ್ ಬದಲಾಗಿಲ್ಲ… ಅವಾಗ ಹೆಂಗ ಅದಿರಿ, ಇಗೋ ಹಂಗ ಅದೀರಿ?

ಸ : ಇಲ್ಲೋ, ಮದ್ವಿ ಆದ್ಮ್ಯಾಗ  ಸ್ವಲ್ಪ ದಪ್ಪ ಆಗಿನಿ. ದಿನಂಪ್ರತಿ ಖಮ್ಮಗ ಊಟ ಸಿಗತೇತಿ. ನೀನು ಮದ್ವಿ ಆಗು ತಿಳಿತೇತಿ.

ನಾ : ನೋಡು ತೊಗೋರಿ ಸರ… ಕಾಲಯಾ ತಸ್ಮೈ ನಮಃ 🙂

ಸ್ವಲ್ಪ ಹೊತ್ತಿನ ಪ್ರಯಾಣದ ನಂತರ ಮನಿ ಬಂತು

ಸ : ಇಳಿಪಾ , ಇಲ್ಲೇ ನಮ್ಮನಿ…

ನಾ : ಮಸ್ತ ಜಾಗ ಆದ ಬಿಡ್ರಿ ಸರ.. ಏನಿಲ್ಲ ಅಂದ್ರೂ ಒಂದ ಸಾವಿರ ಮನಿ ಇದ್ದಂಗ ಅದಾವ ಇಲ್ಲೇ….

ಸ : ಹೌದೋ, ಭಾಳ ಮನಿ ಅದಾವ. ಆದ್ರ ಇಲ್ಲಿ ಮಂದಿ ಇಲ್ಲಿ ಇರಾಂಗಿಲ್ಲಾ. ನಮ್ಮ ಮಂದಿ ರಗಡ ಅದಾರ ಇಲ್ಲಿ.

ನಾ : ಹಂಗಾದ್ರ ಹಬ್ಬ ಗಿಬ್ಬ ಜೋರರಿರಬೇಕು ಇಲ್ಲಿ….

ಸ : ಹಂಗ ನೋಡಿದ್ರ ಸ್ವಲ್ಪ ಮಸ್ತ ಐತಿ ಇಲ್ಲೇ!

ಮನಿಯೊಳಗ ಕಾಲಿಟ್ವಿ

ಸ : ನೋಡಪಾ ಇಕೀನ ನನ್ನ ಶ್ರೀಮತಿ

ನಾ : ನಮಸ್ಕಾರ್ರಿ ವೈನಿ

ವೈ : ನಮಸ್ಕಾರ. ಕುಂಡರ್ರಿ,  ಕುಡ್ಯಾಕ ನೀರ ತರ್ತೆನಿ…

ಸ : ಬಾರೋ, ಇಲ್ಲೇ ಸೀಧಾ ನಾಷ್ಟಾಕ್ಕ ಕುಂಡರ್ಬಾ

ನಾ : ನೀವ ಹೇಳ್ದಂಗ ಆಗ್ಲಿರಿ ಸರ..

ಸ : ತೊಗೋ ಥಾಲಿಪಟ್ಟಿ…೧,೨,೩,೪…

ನಾ  : ಸಾಕ್ರಿ ಸರ.

ಸ : ಸುಮ್ಮ ತಿನ್ನೋ… ತೊಗೋ ಇಲ್ಲಿ ಚಟ್ನಿ ಮತ್ತ ಮೊಸ್ರ…

ನಾ : ಸರ ಮಸ್ತ ಅದರೀ ಥಾಲಿಪಟ್ಟಿ… ಬಾಯ್ತುಂಬ ಖಾರ… ಝಬರಾದಸ್ತ ಅದರಿ ವೈನಿ…

ಸ ( ೧೦ ಮಿಂಟ ಆದಮ್ಯಾಗ) : ತೊಗೋ ಥಾಲಿಪಟ್ಟಿ…೫,೬,೭,೮….

ನಾ : ಸಾಕ್ರಿ ಸರ. ಭಾಳ ಆತು.

ಸ : ನಾಚ್ಕೋಬ್ಯಾಡ, ತಿನ್ನೋ…

ನಾ : ನಾಚ್ಕೊಂಡಿದ್ರ, ೨ನೇ ಥಾಲಿಪಟ್ಟಿ ಆದ್ಮ್ಯಾಗ ಮುಂದ ತಿಂತಿರ್ಲಿಲ್ಲ… ಈಗ ಭಾಳ ಆಗ್ಯದ…

ಸ : ಚಾನೋ ಕಾಫಿನೋ?

ನಾ : ಎರಡೂ ಕುಡ್ಯಾಂಗಿಲ್ರಿ ಸರ. ಒಂದ ವಾಟಗ ಹಣ್ಣಿನ ರಸ ಕೊಡ್ರಿ…

ವೈ : ತೊಗೋರಿ…

ನಾ (ಮಸ್ತ ತಿಂದ / ಕುಡುದ ತೇಗಿ ಆದ್ಮ್ಯಾಗ) : ಸರ ಹೊರಗ ಊರ  ಮಸ್ತ ಕಾಣತೆತ್ರಿ.

ಸ : ಹೌದೋ, ಇದೆಲ್ಲಾ ಹೊಸ ಊರು. ಮಸ್ತ ಬೆಳದದ.

ಸ : ತಡಿ, ಬ ಗ ಕರೆ ಮಾಡೂನು.

ಬ : ನಮಸ್ಕಾರ ಮಾಮ, ಹೆಂಗದಿ.

ಸ : ಇಲ್ಲಿ ಇಂವಾ ಬಂದಾನ ನೋಡು.

ಬ : ಅಂವಾ ಹೇಳಿದ್ದ. ಹೋಕ್ಕೆನಿ ಅಂತ.

ಸ : ನೀನು ಒಮ್ಮೆ ಬಾ ಈಕಡೆ

ಬ : ಬರೂನು

ಹಂಗ ಹರಟಿ ಹೊಡದಮ್ಯಾಗ

ವೈ : ದೀಪಾವಳಿಗೆ ಮಾಡಿದ್ದ ಲಕ್ಷ್ಮಿ ಪೂಜಾ ಇಳುಸದದ, ಬರ್ರಿ ಆರತಿ ಮಾಡುವಂತ್ರಿ…

ನಾ : ಸರ, ನಾ ಮೊದ್ಲೇ ಸಲ ಇಂಗ್ಲೆಂಡಿಗೆ ಹೋದಾಗ ಹಿಂಗ ಗಣಪತಿ ಇಳಿಸಿ, ಸಮುದ್ರದಾಗ ಬಿಡಾಕ ಹೋಗಿದ್ದೆ. ಈಗ ನಿಮ್ಮ ಮನ್ಯಾಗ ಪೂಜಾ ಇಳ್ಸು ವ್ಯಾಳೆಕ ಬರೋಬ್ಬರ ಬಂದೀನಿ ನೋಡ್ರಿ…

ಸ : ಛುಲೋ ಆತ ನೋಡೋ…

(ಪೂಜಾ ಇಳ್ಸುದು ಆದ್ಮ್ಯಾಗ)

ಸ & ವೈ (ಕೂಡಿ) : ನಡಿ ನಿನಗ ಇಲ್ಲಿ ಸರೋವರದ ತಟಕ್ಕ ಕರಕೊಂಡ ಹೊಕ್ಕೇವಿ. ನೋಡುವಂತಿ.

ನಾ : ನಡ್ರಿ. ಹೊಂಡುನು

ಗಾಡಿ ತೊಗೊಂಡ ಸರೋವರ ತಟಕ್ಕ ಬಂದ್ವಿ

ಸ : ಇನ್ನ ಇಳಿ. ಉಸಕನ್ಯಾಗ ಅಲ್ಲಿ ತನ ನಡ್ಕೊಂಡು ಹೋಗೂನು

ಸ : ಅಲ್ಲೇ ಗುಡ್ಡ ಕಾಣಾತೇತಿ ಅಲ, ಅದ್ರ ಬರೋಬ್ಬರ ಹಿಂದ ನಯಾಗರಾ ಜಲಪಾತ ಐತಿ ನೋಡು… ಹಿಂಗ ನಿರಾಗ ಹೋದ್ರ ಒಂದ ೭೦ ಕಿಮೀ ಅಕ್ಕೇತಿ. ಗಾಡಿ ತೊಗೊಂಡ ಸುತ್ತ ಹಾಕಿ ಹೋದ್ರ ಒಂದ ನೂರರ ಮ್ಯಾಲೆ ಸ್ವಲ್ಪ ಚಿಲ್ಲರ ಆಕ್ಕೇತಿ.

ನಾ : ಮಸ್ತ್ ಬಿಡ್ರಿ ಸರ… ನೀವೇನ್ ರಗಡ ಸಲ ಹೋಗಿರ್ಬೇಕು..

ಸ : ಹೌಂದೋ. ಭಾಳ ಸಲ ಹೋಗೆನಿ. ಅಂಧಂಗ ನಾಳೆ ಏನ್ ಮಾಡಾತಿ?

ನಾ : ಏನಿಲ್ರಿ. ಬೆಳಗ್ಗೆ ಎದ್ದು, ಹಂಗ ಊರ ಸುತ್ತಾಡಿ ಮತ್ತ ಯುರೋಪಗೆ ಗಾಡಿ ಹತ್ತೇನ ನೋಡ್ರಿ…

ಸ : ಹಂಗಾರ ಸ್ವಲ್ಪ ದೌಡ ಏಳು, ಬಂವ್ ಅಂತ ಬೆಳಗ್ಗೆ ನಯಾಗರಾಕ್ಕ ಹೋಗಿ ಮಧ್ಯಾಹ್ನ ಅಂದ್ರ ನಿನ್ನ ವಿಮಾನ ನಿಲ್ದಾಣಕ್ಕ ಬಿಡತೇನಿ.

ನಾ : ಸರ, ಅಷ್ಟ ಅವಸರ ಮಾಡುದು ಬ್ಯಾಡ್ರಿ

ಸ : ನೋಡೋ, ನಾಕ ತಾಸನ್ಯಾಗ ಹೋಗ ಬರ್ತೇವಿ

ನಾ : ಈ ಸರ್ತೆ ಬ್ಯಾಡ ಬಿಡ್ರಿ. ಮುಂದಿನ ಸಲ ಬಂದಾಗ ನೋಡುನು

ಸ : ಅಂದಗ ನಿನ್ನ ಗೆಳ್ಯಾರೆಲ್ಲಾ ಎಲ್ಲಾ ಅದಾರೂ?

ನಾ (ಗೆಳ್ಯಾರಗೆ ಕರೆ ಮಾಡಿ) : ಎಲ್ಲದಿರ್ಪಾ? (ಕನ್ನಡದಾಗ ಅಲ್ಲ)

ಗೆಳ್ಯಾ: ಇಂಥಲ್ಲಿ ಅದೇವಿ. ನೀ ಬಾ. ಇನ್ನೊಂದು ಅರ್ಧಾ ತಾಸು ಇಲ್ಲೇ ಇರ್ತೇವಿ

ನಾ : ಸರ, ಅವ್ರ ಇಂಥಲ್ಲಿ ಅದಾರ. ಅಲ್ಲಿ ಬಿಡ್ರಿ…

ಸ : ಗಾಡಿ ಹತ್ತ ಹಂಗಾರ

ಆ ಜಾಗ ಬಂದ್ಮ್ಯಾಗ

ಸ : ಅವ್ರಿಗೆ ಎಲ್ಲಿ ಅದರ ಅಂತ ಪಕ್ಕಾ ಒಮ್ಮೆ ಕೇಳಿ ನೋಡು.

ನಾ (ಗೆಳ್ಯಾರಗೆ) : ಎಲ್ಲಿ ಅದೀರ್ಲೆ? ನಾ ಇಲ್ಲೇ ಬಂದೇನಿ.

ಗೆಳ್ಯಾ : ಅಲ್ಲೇ ಇರು ಬಂದ್ವಿ.

ನಾ : ಸರ, ಅವ್ರ ಇಲ್ಲಿ ಬರಾತಾರ್ರಿ.

ಸ : ಆತೋ, ಭಾಳ ಛುಲೋ ಆತು ಭೆಟ್ಟಿ ಆದಿದ್ದು.

ನಾ : ನಗೂ ಭಾಳ ಖುಷಿ ಆತ್ರಿ… ವೈನಿರಿ, ಮಸ್ತ ಥಾಲಿಪಟ್ಟಿ ಮಾಡಿದ್ರಿ… ಮಸ್ತ ಇದ್ವು… ಮತ್ತ ಇನ್ನೊಮ್ಮೆ ತಿನ್ನಾಕ ಬರ್ತೇನಿ.

ಸ & ವೈ : ಮತ್ತ ಬಾಪಾ!

ನಾ :  ಬರ್ತೆನ್ರಿ ಹಂಗಾರ. ಮತ್ತ ಭೆಟ್ಟಿಯಾಗೂನಂತ…

ಸಾವಿರಾರು ಮೈಲುಗಳ ದೂರ ವಿದೇಶದಾಗ ಪಕ್ಕಾ ಜಮಖಂಡಿದಾಗ ಇರೋಹಂಗ ಮಾತಾಡ್ಸಿ, ತಿನಿಸಿ, ಉಣಿಸಿ, ಆಮ್ಯಾಲೆ ನಿನಗ ತಿಳಿಯಾಂಗಿಲ್ಲ ಅಂತ ಬೈದು ಕಿಸ್ಯಾಗ ರೊಕ್ಕ ಇಟ್ಟು ಆದರಾತಿಥ್ಯ ನೀಡಿದ ನಮ್ಮ ಸರ ಮತ್ತು ಅವರ ಶ್ರೀಮತಿಯವರಿಗೆ ಒಂದು ತುಂಬು ಹೃದಯದ ಧನ್ಯವಾದಗಳು.

ಪಡಸಾಲೆ

ಹುಟ್ಟಿನಿಂದಲೂ ನಾವು ಅತೀ ಹೆಚ್ಚು ಕ್ಷಣಗಳನ್ನು ಕಳೆಯುವ ಜಾಗ ಪಡಸಾಲೆ. ಪಡಸಾಲೆಯಲ್ಲಿ ನಡೆದ ಅನೇಕ ಮಾತುಕತೆಗಳು, ಆಟೋಟಗಳು, ಪ್ರೀತಿಪಾತ್ರದವರೊಂದಿಗೆ ಜಗಳಗಳು ಹಾಗೆಯೇ ಇನ್ನೂ ಎಷ್ಟೊಂದು ಸವಿನೆನಪುಗಳು ಕೂಡಿರುತ್ತವೆ. “ನಾ ಕಂಡಂತೆ ಪಡಸಾಲೆ” ಈ ತನ್ನರಹದ ಮೂಲ…